ದಾಮೋದರ್ ಕಣಿವೆ ಯೋಜನೆ -
ಬಿಹಾರದಲ್ಲಿ ಛೋಟಾ ನಾಗಪುರದ ಬೆಟ್ಟಗಳ ಪ್ರದೇಶದಲ್ಲಿ ಹುಟ್ಟಿ, 625 ಕಿಮೀ. ಹರಿದು ಪಶ್ಚಿಮ ಬಂಗಾಲದಲ್ಲಿ ಹೂಗ್ಲಿ ನದಿಯನ್ನು ಸೇರುವ ದಾಮೋದರ್ ನದಿಯ (ನೋಡಿ- ದಾಮೋದರ್-ನದಿ) ಪ್ರವಾಹವನ್ನು ನಿಯಂತ್ರಿಸಿ ಅದನು ಉಪಯುಕ್ತವಾಗಿ ಬಳಸಿಕೊಳ್ಳಲು ಕೈಗೊಂಡಿರುವ ವಿವಿಧೋದ್ದೇಶ ಯೋಜನೆ. ಈ ಯೋಜನೆ ಆವಶ್ಯಕವೆಂಬುದು ಮನವರಿಕೆಯಾದ್ದು 1943ರಲ್ಲಿ. ಈ ನದೀಕಣಿವೆಯ ಸುತ್ತಣ ಪ್ರದೇಶ ಈಗ ಭಾರತದಲ್ಲಿ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶ. ಇಲ್ಲಿ ಅನೇಕ ಕೈಗಾರಿಕೆಗಳು ಬೆಳೆದಿವೆ. ಭಾರತದ ಅತ್ಯಂತ ದೊಡ್ಡ ಕಬ್ಬಿಣ ಉಕ್ಕು ಕಾರ್ಖಾನೆಯೂ ರೈಲ್ವೆ ಎಂಜಿನ್ ತಯಾರಿಕಾ ಕೇಂದ್ರವೂ ಸಿಮೆಂಟ್ ಕಾರ್ಖಾನೆಯೂ ಇಲ್ಲಿವೆ. ದಾಮೋದರ್ ನದಿಯ ಮೇಲ್ದಂಡೆ ಅರಣ್ಯ ಪ್ರದೇಶ. ಸಾಗುವಾನಿ, ಅರಗು, ಟಸ್ಸೋರ್ ರೇಷ್ಮೆ ಇವು ಇಲ್ಲಿಯ ಉತ್ಪನ್ನಗಳು. ಕೆಳದಂಡೆಯ ಪ್ರದೇಶ ಫಲವತ್ತಾದ ನೆಲ. ಸರಿಯಾದ ನೀರಾವರಿ ವ್ಯವಸ್ಥೆ ಇಲ್ಲದೆ ಇದು ಸಾಂದ್ರ ಬೇಸಾಯಕ್ಕೆ ಒಳಪಟ್ಟಿರಲಿಲ್ಲ. ದಾಮೋದರ್ ನದೀ ಬಯಲಿನಲ್ಲಿ ಅತ್ಯಂತ ವ್ಯಾಪಕವಾಗಿ ಕಲ್ಲಿದ್ದಲು ಮತ್ತು ಬಾಕ್ಸೈಟ್ ನಿಕ್ಷೇಪಗಳಿವೆ. ಪಿಂಗಾಣಿ ಮಣ್ಣು, ಅಭ್ರಕ, ಸುಣ್ಣಕಲ್ಲು, ಸೀಸ, ಬೆಳ್ಳಿ, ಆಂಟಿಮೊನಿ, ಕ್ವಾಟ್ರ್ಸ್ ಇವು ಇಲ್ಲಿ ದೊರಕುವ ಇತರ ಖನಿಜಗಳು. ಅಗ್ಗವಾಗಿ ವಿದ್ಯುತ್ತು ದೊರಕುವುದಾಗಿದ್ದರೆ ಇವನ್ನೆಲ್ಲ ಬಳಸಿಕೊಳ್ಳಬಹುದಾಗಿತ್ತು.

	ದಾಮೋದರ್ ಕಣಿವೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕಾರ್ಪೊರೇಷನ್ ಒಂದನ್ನು ಆರಂಭಿಸಲು 1948ರಲ್ಲಿ ಭಾರತ ಸರ್ಕಾರ ಒಂದು ಅಧಿನಿಯಮವನ್ನು ಜಾರಿಗೆ ತಂದಿತು. ನೀರಾವರಿ, ವಿದ್ಯುತ್ತಿನ ಉತ್ಪಾದನೆ, ಪ್ರವಾಹ ನಿಯಂತ್ರಣ, ಮುಂತಾದ ಕಾರ್ಯಕ್ರಮ ಕೈಗೊಳ್ಳುವುದು ದಾಮೋದರ್ ಕಣಿವೆ ಕಾರ್ಪೊರೇಷನ್ನಿನ (ಡಿ.ವಿ.ಸಿ.) ಕಾರ್ಯಭಾರ. ಮೇಲೆ ಹೇಳಿದವುಗಳೇ ಅಲ್ಲದೆ ನೌಕಾಯಾನ, ಅರಣ್ಯಗಾರಿಕೆ, ಸಾರ್ವಜನಿಕ ಆರೋಗ್ಯ, ಆರ್ಥಿಕ ಬೆಳೆವಣಿಗೆ- ಮುಂತಾದವೂ ಇದರ ಉದ್ದೇಶಗಳು.

	ಬಾರಕಾರ್ ನದಿಯ ಮೇಲೆ ಮೈಥಾನ್ ಮತ್ತು ಶಿಲೈಯ ಎಂಬಲ್ಲೂ ಕೋನಾರ್ ನದಿಯ ಮೇಲೂ ದಾಮೋದರ್ ನದಿಗೆ ಅಡ್ಡಲಾಗಿ ಪಾಂಚೇತ್ ಬೆಟ್ಟದ ಬಳಿಯಲ್ಲೂ ಜಲ ವಿದ್ಯುತ್ತನ್ನು ಉತ್ಪಾದಿಸಲು ಅನುಕೂಲವಾಗುವಂತೆ ಕಟ್ಟೆಗಳ ನಿರ್ಮಾಣ; ಬೊಕಾರೊ, ದುರ್ಗಾಪುರ ಮತ್ತು ಚಂದ್ರಪುರದಲ್ಲಿ ಶಾಖ ವಿದ್ಯುತ್ ಕೇಂದ್ರಗಳ ಸ್ಥಾಪನೆ; ದುರ್ಗಾಪುರದ ಬಳಿಯಲ್ಲಿ ನೀರಾವರಿಗೆ ಅನುಕೂಲವಾಗುವಂತೆ ಜಲಾಶಯ ನಿರ್ಮಾಣ; ವ್ಯಾಪಕವಾದ ವಿದ್ಯುಜ್ವಾಲದ ರಚನೆ-ಇವು ಈ  ಯೋಜನೆಯ ಅಡಿಯ ಮುಖ್ಯ ಕಾರ್ಯಕ್ರಮಗಳು. ಪಶ್ಚಿಮ ಬಂಗಾಲದ ದುರ್ಗಾಪುರದ ಬಳಿಯ ಜಲಾಶಯದ ಕಟ್ಟೆಯ ಉದ್ದ 757 ಮೀ., ಎತ್ತರ 13 ಮೀ. 1955ರಲ್ಲಿ ಪೂರೈಸಿದ ಈ ಕಟ್ಟೆಯಿಂದ 4 ಲಕ್ಷ ಹೆಕ್ಟೇರ್ ನೆಲಕ್ಕೆ ನೀರಾವರಿ ಸೌಲಭ್ಯ ಒದಗುತ್ತದೆ. ಅಲ್ಲದೆ ನೀರಾವರಿ, ನೌಕಾಯಾನ-ಎರಡಕ್ಕೂ ಅನುಕೂಲವಾಗುವಂತೆ 130ಕಿಮೀ. ಉದ್ದದ ಕಾಲುವೆಯ ನಿರ್ಮಾಣವೂ ಈ ಕಾರ್ಯಕ್ರಮದಲ್ಲಿ ಸೇರಿದೆ. ಕಲ್ಕತ್ತದಿಂದ 45 ಕಿಮೀ. ಮೇಲೆ ಹೂಗ್ಲಿಯನ್ನು ಕೂಡುವ ಈ ಕಾಲುವೆಯ ಮೇಲೆ ದಾಮೋದರ ಕಣಿವೆಯಿಂದ ಕಲ್ಕತ್ತಾಕ್ಕೆ ಕಲ್ಲಿದ್ದಲೇ ಮುಂತಾದ ಸಾಮಗ್ರಿಗಳು ಸಾಗಬಹುದು.  ಜಲವಿದ್ಯುತ್ ಉತ್ಪತ್ತಿಯಲ್ಲಿ ಶ್ರಾಯೀಣವಾಗಿ ಸಂಭವಿಸುವ ಏರಿಳಿತಗಳನ್ನು ಸರಿದೂಗಿಸುವ ಸಲುವಾಗಿ ಬೊಕಾರೊದಲ್ಲಿ ಕಟ್ಟಲಾದ ಶಾಖ ವಿದ್ಯುತ್ ಕೇಂದ್ರದ ಕೆಲಸ 1953ರಲ್ಲಿ ಪೂರೈಸಿತು.  ಕಡಿಮೆ ದರ್ಜೆಯ ಕಲ್ಲಿದ್ದಲನ್ನು ಬಳಸಿಕೊಂಡು 2 ಲಕ್ಷ ಕಿವಾ. ವಿದ್ಯುತನ್ನು ಈ ಕೇಂದ್ರ ಉತ್ಪಾದಿಸುತ್ತದೆ.  ತಿಲಯಯ, ಕೋನಾರ್, ಮೈಥಾನ್ ಮತ್ತು ಪಾಂಚೆತ್ ಬೆಟ್ಟದ ಕಟ್ಟೆಗಳಿಂದ ನಿರ್ಮಿತವಾಗಿರುವ ಒಟ್ಟು ಜಲಾಶಯ ಸಾಮಥ್ರ್ಯ 28.9 ಲಕ್ಷ ಎಕರೆ-ಅಡಿ.  ವಿದ್ಯುತ್ತಿನ ಸ್ಥಾಪಿತ ಸಾಮಥ್ರ್ಯ 1,46,000 ಕಿವಾ.  ಪ್ರವಾಹವನ್ನು 6,50,000 ಕ್ಯೂಸೆಕ್ಕುಗಳಿಂದ 2,50,000 ಕ್ಯೂಸೆಕ್ಕುಗಳಿಗೆ ತಗ್ಗಿಸಲು ಮೈಥಾನ್ ಮತ್ತು ಪಾಂಚೇತ್ ಬೆಟ್ಟದ ಕಟ್ಟೆಗಳನ್ನು ನಿಯೋಜಿಸಲಾಗಿದೆ.  ಬಾರಕರ್ ನದಿಯ ಮೇಲಣ ತಿಲೈಯ ಕಟ್ಟೆಯ ಉದ್ದ 400 ಮೀ. ಎತ್ತರ 37ಮೀ.  ಇದನ್ನು 1953ರಲ್ಲಿ ಉದ್ಘಾಟಿಸಲಾಯಿತು.  ಇದು ಪ್ರವಾಹದ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ 40,000 ಹೆಕ್ಟೇರ್ ನೆಲಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ.  ಜಲಾಶಯದಲ್ಲಿ ಮೀನುಗಾರಿಕೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.  

ದಾಮೋದರ್ ನದಿಯ ಉಪನದಿಗಳಲ್ಲೊಂದಾದ ಕೋನಾರ್‍ನ ಮೇಲಣ ಕೋನಾರ್ ಕಟ್ಟೆಯ ಉದ್ದ 4,287 ಮೀ., ಎತ್ತರ 95ಮೀ.   ಇದರ ನಿರ್ಮಾಣ ಕಾರ್ಯವನ್ನು 1954ರಲ್ಲಿ ಪೂರೈಸಲಾಯಿತು.  ಇದರಿಂದ 40,000 ಹೆಕ್ಟೇರ್ ನೆಲ ನೀರಾವರಿಗೆ ಒಳಪಡುತ್ತದೆ.  ಇಲ್ಲಿ ಉತ್ಪತ್ತಿಯಾಗುವ ವಿದ್ಯುತ್ ವರ್ಷಕ್ಕೆ 19,10,00,000 ಕಿವಾ.  ಗಂಟೆಗಳು.  ಬಾರಕಾರ್ ನದಿಯ ಕೆಳದಂಡೆಯ ಕಟ್ಟೆ ಮೈಥಾನ್, ಇದು ಪ್ರವಾಹವನ್ನು ನಿಯಂತ್ರಿಸುವುದಲ್ಲದೆ 90,000 ಹೆಕ್ಟೇರುಗಳಿಗೆ ನೀರೊದಿಸುತ್ತದೆ.  ಇಲ್ಲಿ ವರ್ಷಕ್ಕೆ 16,40,00,000 ಕಿವಾ. ಗಂ. ಜಲ ವಿದ್ಯುತ್ತು ಉತ್ಪಾದನೆಯಾಗುತ್ತದೆ.  ಮೈಥಾನ್ ಕಟ್ಟೆಯ ಉದ್ದ 3,924ಮೀ., ಎತ್ತರ 53ಮೀ. ಮೈಥಾನ್ ಕಟ್ಟೆ ಈ ಪ್ರದೇಶದ ಮಧ್ಯದಲ್ಲಿರುವದರಿಂದ ಸಿಂಧ್ರಿ ರಸಗೊಬ್ಬರ ಕಾರ್ಖಾನೆ, ಚಿತ್ತರಂಜನ್ ಎಂಜಿನ್ ಕಾರ್ಖಾನೆ ಮತ್ತು ಇತರ ಕಾರ್ಯಾಗಾರಗಳಿಗೆ ವಿದ್ಯುತ್ತನ್ನೊದಗಿಸುವ ಮುಖ್ಯ ಕೇಂದ್ರ ಇದು.  ಪಾಂಚೇತ್ ಬೆಟ್ಟದ ಕಟ್ಟೆಯ ಮುಖ್ಯ ಉದ್ದೇಶ ಪ್ರವಾಹನಿಯಂತ್ರಣ.  ಇದರ ಬಳಿ 40,000 ಕಿವಾ.  ಉತ್ಪಾದಿಸುವ ಜಲವಿದ್ಯುತ್ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಮಣ್ಣಿನ ಮತ್ತು ನೀರಿನ ಸಂರಕ್ಷಣೆಯೂ ಈ ಯೋಜನೆಯ ಅಂಗವಾಗಿದೆ.  ನೆಲದ ಮಣ್ಣು ಕೊಚ್ಚಿಹೋಗುವುದನ್ನು ತಡೆಯದಿದ್ದರೆ ಜಲಾಶಯಗಳಲ್ಲಿ ಬಹು ಬೇಗ ಮಣ್ಣು ತುಂಬಿಕೊಳ್ಳುತ್ತದೆ.  ನೆಲ ನಿಸ್ಸಾರವಾಗುತ್ತದೆ.  ಆದ್ದರಿಂದ ಈ ಪ್ರದೇಶದ ಮಣ್ಣಿನ ವ್ಯಾಪಕ ಸರ್ವೇಕ್ಷಣ ನಡೆಸಲಾಗಿದೆ.  ದಾಮೋದರ ಕಣಿವೆ ಯೋಜನೆಯ ಆರಂಭದ ಕಾಲದಲ್ಲಿ ಈ ಕಣಿವೆಯ ಮೇಲ್ಭಾಗಗಳಲ್ಲಿ ಅಲ್ಲಲ್ಲಿ ನೀರಾವರಿ ಹಾಗೂ ನೆಲಸಾರರಕ್ಷಣೆಗಾಗಿ ಸಣ್ಣ ಕಟ್ಟೆಗಳನ್ನು ಕಟ್ಟಲಾಯಿತು.  ಅದಿವಾಸಿ ಕಟ್ಟೆ, ದೇವಚಂದಾ ಕಟ್ಟೆ, ಬಚ್ಛಿ ಕಟ್ಟೆ, ಗರಿಯ ಕರ್ಮ ಕಟ್ಟೆ-ಇವು ಮಳೆಯ ನೀರನ್ನು ತಡೆಗಟ್ಟಿ, ಮನ್ಣು ಕೊಚ್ಚಿಹೋಗುವುದನ್ನು ತಪ್ಪಿಸಿ, ನೀರಾವರಿಗೆ ನೀರನ್ನೊದಗಿಸುತ್ತದೆ.  ಸಣ್ಣ ಮತ್ತು ಗೃಹ ಕೈಗಾರಿಕೆಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸಿ ಸೂಕ್ತ ಕಾರ್ಯಗಳನ್ನು ಅಳವಡಿಸಲಾಗಿದೆ.  

ದಾಮೋದರ ಕಣಿವೆ ಕಾರ್ಪೋರೇಷನ್ ಯೋಜನೆಯ ಅಡಿಯಲ್ಲಿ ಎಂಟು ದೊಡ್ಡ ಕಟ್ಟೆಗಳನ್ನು ಮಾತ್ರ ನಿರ್ಮಿಸಬೇಕೆಂದು ಮೊದಲು ಯೋಚಿಸಲಾಗಿತ್ತು. ಆದರೆ ನಾಲ್ಕು ಕಟ್ಟೆಗಳನ್ನು ಮಾತ್ರ ಕಟ್ಟಲಾಗಿರುವುದರಿಂದ ವಿವಿಧೋದ್ದೇಶಗಳು ಸಮಪರ್ಕವಾಗಿ ಸಫಲವಾಗಿಲ್ಲ.  ಮೊದಲು ಯೋಚಿಸಿದ್ದಕ್ಕಿಂತ ಹೆಚ್ಚಾಗಿ, ಕಣಿವೆಯಿಂದ ಆಚೆಗೂ ವಿದ್ಯುತ್ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ.  ಬಂಗಾಲ ಬಿಹಾರಗಳಲ್ಲಿರುವ ಈ ಪ್ರದೇಶವನ್ನು ಭಾರತದ ರೂರ್ ಎಂದು ಕರೆಯಲಾಗಿದೆ.  ಇಲ್ಲಿ ಬೆಳೆದಿರುವ ಕೈಗಾರಿಕೆಗಳಿಗೆ ದಾಮೋದರ್ ಕಣಿವೆ ಯೋಜನೆಯಿಂದ ಮಿದ್ಯುತ್ತು ಸಾಲದಂತಾಗಿದೆ.  ಕೈಗಾರಿಕೆ ಪ್ರದೇಶಗಳಲ್ಲಿ ಹೆಚ್ಚಿರುವ ನೀರಿನ ಬಳಕೆಯಿಂದಾಗಿ ರಬಿ ಬೆಳೆಗೆ ಸಾಕಷ್ಟು ನೀರು ಒದಗುತ್ತಿಲ್ಲ.  ಶ್ರಾಯಾನುಗುಣವಾಗಿ ಜಲವಿದ್ಯುತ್ತಿನ ಸರಬರಾಜು ಹೆಚ್ಚು ಕಡಿಮೆ ಆಗುತ್ತಿರುವುದರಿಂದ ಉಷ್ಣ ವಿದ್ಯುತ್ತಿನ ಉತ್ಪಾದನೆಯ ಅಗತ್ಯ ಬಹಳ ಮಟ್ಟಿಗೆ ಅಧಿಕವಾಗಿದೆ.
(ಎಂ.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ